ಬೆಂಗಳೂರಿನ ಮಳೆ, ಪ್ರವಾಹ; ಐಐಎಸ್‌ಸಿ ಮಾತು ಕೇಳಿದ್ದರೆ?

Spread the love


ಬೆಂಗಳೂರಿನಲ್ಲಿ ಯಾಕಿಂಥ ಪ್ರವಾಹ?

ಬೆಂಗಳೂರಿಗೆ ಎದುರಾಗಬಹುದಾದ ಅಪಾಯಗಳ ಬಗ್ಗೆ ಪರಿಸರವಾದಿಗಳು, ತಜ್ಞರು ಆಗಾಗ್ಗೆ ಎಚ್ಚರಿಸುತ್ತಲೇ ಬಂದಿದ್ದರು. ಯಾರೂ ಕಿವಿಗೊಡುವ ಗೋಜಿಗೆ ಹೋದಂತಿಲ್ಲ. ಬೆಂಗಳೂರಿನಲ್ಲಿ ಅಭಿವೃದ್ಧಿಗೆ ಪ್ರಯತ್ನವೇ ಆಗಿಲ್ಲ ಎಂದಲ್ಲ. ಬಹಳಷ್ಟು ಆಗಿದೆ. ಹಿಂದೆ ತೆರೆದ ಮೋರಿ, ಚರಂಡಿಗಳು ಅನೇಕ ಜನರನ್ನು ಬಲಿತೆಗೆದುಕೊಂಡಿದ್ದಿದೆ. ಈಗ ಆ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಅಪರೂಪಕ್ಕೊಮ್ಮೆ ಅಂಥ ಘಟನೆಗಳು ನಡೆಯುತ್ತವೆ. ಆದರೆ, ಚೆನ್ನೈ, ಮುಂಬೈನಂತೆ ಬೆಂಗಳೂರಿನಲ್ಲಿ ಇಡೀ ಏರಿಯಾಗಳೇ ನೀರಿನಲ್ಲಿ ಮುಳುಗಡೆಯಾಗುವ ಹೊಸ ಸಮಸ್ಯೆಯನ್ನು ಎದುರಿಸುವ ಪ್ರಯತ್ನ ಆಗಲೇ ಇಲ್ಲ.

ಈಗಿರುವ ಬೆಂಗಳೂರಿನಲ್ಲಿ ಕೆಂಪೇಗೌಡರ ಕಾಲದಲ್ಲಿ ಸಾವಿರದಷ್ಟು ಕೆರೆಗಳಿದ್ದವಂತೆ. ಈಗ 200 ಕೆರೆಗಳೂ ಇಲ್ಲ. ಈ ಕೆರೆಗಳೂ ಕೂಡ ಬತ್ತಿಹೋಗುವ ಹಂತದಲ್ಲಿವೆ. ಹೂಳೆತ್ತುವ ಪ್ರಯತ್ನವೂ ಆಗಿಲ್ಲ. ಮಳೆ ಸುರಿದರೆ ಇವು ಒಂದು ರೀತಿಯಲ್ಲಿ ಇಂಗುಗುಂಡಿಗಳಂತೆ ಕಾರ್ಯನಿರ್ವಹಿಸುತ್ತವೆ. ಕೆರೆಗಳು ಇಲ್ಲದೇ ಇರುವುದಿಂದ ಮಳೆ ನೀರು ಸಿಕ್ಕ ಸಿಕ್ಕ ಕಡೆ ಹರಿದು ಸಹಜವಾಗಿ ಪ್ರವಾಹ ಸೃಷ್ಟಿಸುತ್ತದೆ.

ಇನ್ನು ಬೆಂಗಳೂರಿನ ಕೆರೆಗಳ ವಿಶೇಷತೆ ಎಂದರೆ ವಿವಿಧ ಕೆರೆಗಳು ರಾಜಕಾಲುವೆಗಳ ಮೂಲಕ ಪರಸ್ಪರ ಜೋಡಣೆಯಾಗಿವೆ. ಹೀಗಾಗಿ, ಕೆರೆ ಕೋಡಿ ಬಂದರೆ ಅಲ್ಲಿಂದ ನೀರು ರಾಜಕಾಲುವೆಗಳ ಮೂಲಕ ಹರಿದು ಮತ್ತೊಂದು ಕೆರೆ ಸೇರುತ್ತದೆ.

ಬೆಂಗಳೂರಿನಲ್ಲಿ ಒಂದು ಅಂದಾಜು ಪ್ರಕಾರ 890 ಕಿಮೀಯಷ್ಟು ರಾಜಕಾಲುವೆಗಳ ಜಾಲ ಇದೆಯಾದರೂ ಉತ್ತಮ ಸ್ಥಿತಿಯಲ್ಲಿರುವುದು ಅರ್ಧ ಭಾಗ ಮಾತ್ರ. ಉಳಿದವು ಕಸ, ಕೆಸರು ತುಂಬಿಕೊಂಡು ಕೆಲಸಕ್ಕೆ ಬಾರದಂತಾಗಿವೆ.

ಆಡಳಿತದ ಕರ್ಮಕಾಂಡ

ಆಡಳಿತದ ಕರ್ಮಕಾಂಡ

ಎಲ್ಲರಿಗೂ ಗೊತ್ತಿರುವಂತೆ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿರುವುದು ಒತ್ತುವರಿ ಪ್ರದೇಶಗಳಿಂದಾಗಿಯೇ. ನೀರಿನ ಅಡ್ಡಾದಲ್ಲಿ ಮನುಷ್ಯ ಕಡ್ಡಿ ಆಡಿಸಿದ ಫಲ ಇದಾಗಿದೆ. ಕೆರೆ ಕಟ್ಟೆಗಳು ಬರಿದಾದಾಗ ರೈತರು ಜಮೀನು ಮಾಡಲು ಒತ್ತುವರಿ ಮಾಡಿಕೊಳ್ಳುವುದು. ಅದನ್ನು ದೊಡ್ಡ ದೊಡ್ಡ ಬಿಲ್ಡರ್‌ಗಳು ಖರೀದಿಸಿ ಐಷಾರಾಮಿ ಲೇಔಟ್ ಮಾಡುವುದು ಇವೆಲ್ಲವೂ ಎಗ್ಗಿಲ್ಲದೇ ನಡೆಯಿತು. ನೀರಿನ ಕಾಲುವೆಗಳೂ ಒತ್ತುವರಿಯಾದವು. ಸರಕಾರಿ ಜಾಗ ಎಂದರೆ ಸಿಕ್ಕಿದ್ದು ಸೀರುಂಡೆ ಎಂಬಂತೆ ಜನರ ಮನೋಭಾವ. ಒತ್ತುವರಿ ಮಾಡಿಕೊಂಡು ಮುಂದೆ ಸಕ್ರಮ ಮಾಡಿಸಿಕೊಂಡ್ರಾಯ್ತು ಅನ್ನೋ ಧೋರಣೆ.

ಇದಕ್ಕೆ ಇಂಬುಕೊಡುವಂತೆ ಸರಕಾರಿ ನೌಕರರ ಭ್ರಷ್ಟಾಚಾರ. ಬಿಲ್ಡರ್‌ಗಳಿಂದ ದುಡ್ಡು ಪಡೆದು ಕಂಡೂ ಕಾಣದಂತೆ ಇದ್ದು ಬಿಡುವ ಜಾಣಕುರುಡುತನ ಸರಕಾರಿ ಇಲಾಖೆಗಳದ್ದು. ಸಾರ್ವಜನಿಕರ ಬೇಜವಾಬ್ದಾರಿತನ, ಅಧಿಕಾರಿಗಳ ಭ್ರಷ್ಟಾಚಾರ, ಬಿಲ್ಡರ್‌ಗಳ ದುರಾಸೆ ಇವರೆಲ್ಲರ ಪಾಪದ ಫಲ ಈಗ ಪ್ರವಾಹ ರೂಪದಲ್ಲಿ ಬಂದಿದೆ.

ಅಂಗೈಯಲ್ಲಿದೆ ಪರಿಹಾರ

ಅಂಗೈಯಲ್ಲಿದೆ ಪರಿಹಾರ

ಬಿಬಿಎಂಪಿ ಈಗ ರಾಜಕಾಲುವೆ ಒತ್ತುವರಿಯಾದ ಪ್ರದೇಶಗಳಲ್ಲಿನ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಕೈಹಾಕಿರುವುದು ಸ್ವಾಗತಾರ್ಹ. ಈ ಕೆಲಸವನ್ನು ಬಹಳ ಹಿಂದೆಯೇ ಮಾಡಬಹುದಿತ್ತು. ಬೆಂಗಳೂರಿನ ಸಮಸ್ಯೆಗೆ ಪರಿಹಾರ ಹುಡುಕಲು ಸರಕಾರ ಹಲವು ತಜ್ಞರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಉದ್ಭವಿಸಿರುವ ಸಮಸ್ಯೆ ಯಾರಿಗೂ ಆಗದೇ ಇದ್ದಂಥದ್ದಲ್ಲ. ಎಲ್ಲಾ ಕಡೆಯೂ ಇರುವ ಸಮಸ್ಯೆಯೇ.

ಐಐಎಸ್‌ಸಿ ಈಗಾಗಲೇ ಬೆಂಗಳೂರಿನ ಪ್ರವಾಹ ಸಮಸ್ಯೆ ಬಗ್ಗೆ ಹಲವು ಅಧ್ಯಯನ ಮಾಡಿ ಸರಕಾರಕ್ಕೆ ಸಲಹೆಗಳನ್ನು ಕೊಡುತ್ತಲೇ ಇದೆ. ಬೆಂಗಳೂರಿನ ಕೆರೆಗಳನ್ನು ಹೇಗೆ ಉಳಿಸಬಹುದು, ನಗರದ ಯೋಜನೆಯನ್ನು ಹೇಗೆ ರೂಪಿಸಬಹುದು ಎಂದು ಐಐಎಸ್‌ಸಿಯ ವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ.

ಐಐಎಸ್‌ಸಿ ವಿಶ್ವದ ಶ್ರೇಷ್ಠ ವಿದ್ಯಾಸಂಸ್ಥೆಗಳಲ್ಲಿ ಒಂದು. ಬೆಂಗಳೂರಿನಲ್ಲೇ ಇದು ಇರುವುದು. ಆದರೂ ಕೂಡ ಸರಕಾರಗಳ ಕಿವಿಗೆ ಐಐಎಸ್‌ಸಿ ಮಾತುಗಳು ಬೀಳದೇ ಹೋದವು. ವಿಪರ್ಯಾಸ ಎಂದರೆ ಇದು.

ಶ್ರೀಮಂತ ರಾಷ್ಟ್ರಗಳು ಬಚಾವ್

ಶ್ರೀಮಂತ ರಾಷ್ಟ್ರಗಳು ಬಚಾವ್

ಬೆಂಗಳೂರಿನಲ್ಲಿ ಈ ಪರಿ ಬಿದ್ದ ಅಸಾಧಾರಣ ಮಳೆಗೆ ಹವಾಮಾನ ಬದಲಾವಣೆ ಕಾರಣ ಎಂಬುದು ವಾಸ್ತವ ಸಂಗತಿ. ಇದನ್ನು ಯಾರೂ ಅಲ್ಲಗಳೆಯಲು ಅಥವಾ ನಿರ್ಲಕ್ಷಿಸಲು ಆಗುವುದಿಲ್ಲ. ಈ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗಿರುವುದು ಶ್ರೀಮಂತ ದೇಶಗಳೇ.

ಹವಾಮಾನ ಬದಲಾವಣೆಗೆ ಕಾರಣವಾಗುವುದು ಕಾರ್ಬನ್ ಡೈ ಆಕ್ಸೈಡ್, ಮೀಥೇನ್ ಇತ್ಯಾದಿ ಗ್ರೀನ್‌ಹೌಸ್ ಅನಿಲಗಳು. ಅಮೆರಿಕದ ಒಬ್ಬ ವ್ಯಕ್ತಿ ಸರಾಸರಿಯಾಗಿ 16 ಟನ್‌ಗಳಷ್ಟು ಗ್ರೀನ್ ಹೌಸ್ ಗ್ಯಾಸ್ ಹೊರಹೊಮ್ಮಲು ಕಾರಣವಾಗುತ್ತಾನೆ. ಜಾಗತಿಕ ಸರಾಸರಿ 4 ಟನ್ ಮಾತ್ರ. ಅದೇ ಭಾರತದಲ್ಲಿ ಒಬ್ಬ ವ್ಯಕ್ತಿ ಸರಾಸರಿಯಾಗಿ ಒಂದು ಟನ್ ಗ್ರೀನ್‌ಹೌಸ್ ಗ್ಯಾಸ್ ಬಿಡುಗಡೆ ಮಾಡುತ್ತಾನೆ.

ಶ್ರೀಮಂತ ದೇಶಗಳ ಪಾಪದ ಫಲಗಳನ್ನು ಬಡದೇಶಗಳು ಉಣ್ಣುವಂತಾಗಿದೆ. ದೇಶ, ಪ್ರದೇಶಗಳನ್ನು ನೋಡದೆ ಮಳೆ, ಪ್ರವಾಹ, ಚಂಡಮಾರುತಗಳು ರಾಚುತ್ತವೆ. ಶ್ರೀಮಂತ ದೇಶಗಳು ಉತ್ತಮ ಇನ್‌ಫ್ರಾಸ್ಟ್ರಕ್ಚರ್ ರೂಪಿಸಿಕೊಂಡು ಪ್ರಕೃತಿ ಅವಘಡಗಳಿಂದ ಹೆಚ್ಚಿನ ಅಪಾಯವಾಗದಂತೆ ವ್ಯವಸ್ಥೆ ಮಾಡಿಕೊಂಡಿವೆ. ಹೀಗಾಗಿ, ಅಲ್ಲಿ ಭಾರೀ ಮಳೆಯಾದರೂ ಪ್ರದೇಶಗಳು ಮುಳುಗಡೆಯಾಗುವುದು ಅಪರೂಪ. ಆದರೆ, ಜನಸಂಖ್ಯೆ ಹೆಚ್ಚು ಇರುವ ಭಾರತದಂಥ ದೇಶಗಳಲ್ಲಿ ಜಾಗದ್ದೇ ಸಮಸ್ಯೆ. ನೈಸರ್ಗಿಕ ಹರಿವಿಗೂ ಜಾಗ ಕೊಡದೆ ಮನುಷ್ಯನ ಆಕ್ರಮಣವಾಗಿದೆ. ಪರಿಣಾಮವನ್ನು ನಾವೀಗ ನೋಡುತ್ತಿದ್ದೇವೆ.

(ಒನ್ಇಂಡಿಯಾ ಸುದ್ದಿ)Source link

%d bloggers like this: